ಕುರುಖ್ ಭಾಷೆ

	ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದ್ದು ಮದ್ಯ ಹಾಗೂ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಪ್ರಚಾರದಲ್ಲಿರುವ ಮೂರು ಭಾಷೆಗಳಲ್ಲೊಂದು. ಉಳಿದೆರಡು ಮಾಲ್ತೋ ಮತ್ತು ಬ್ರಾಹು ಈ, ಇವೆಲ್ಲವನ್ನೂ ಉತ್ತರ ದ್ರಾವಿಡ ಭಾಷೆಗಳು ಎಂದು ಕರೆವುದಿದೆ. ಕುರುಖ್ ಭಾಷೆ ಛೋಟಾನಾಗಪುರ, ಒರಿಸ್ಸ, ಬಂಗಾಳ ಮತ್ತು ಅಸ್ಸಾಂಪ್ರದೇಶಗಳ ಗುಡ್ಡಗಾಡುಗಳಲ್ಲಿ ವಾಸಮಾಡುವ ಕೆಲವು ಮೂಲನಿವಾಸಿಗಳಲ್ಲಿ ಬಳಕೆಯಲ್ಲಿದೆ. ಇದನ್ನು ಕುಡುಖ್ ಎಂದೂ ಓರಾನ್ ಎಂದೂ ಕರೆಯುತ್ತಾರೆ. ಕುರುಖ್ ಮಾತಾಡುವವರ ಸಂಖ್ಯೆ ಸಮಾರು ಹನ್ನೊಂದು ಲಕ್ಷ. ಕುರುಖಿ ಎಂಬ ಶಬ್ದಕ್ಕೆ ಮಾತಾಡುವವರು ಎಂದೂ ಓರಾನ್ ಎಂಬ ಶಬ್ದಕ್ಕೆ ಮನುಷ್ಯರು ಎಂದೂ ಅರ್ಥ ಹೇಳಬಹುದು. ಈ ಜನಾಂಗದವರು ಬ್ರಾಹುಈ ಭಾಷೆ ಮಾತಾಡುವ ಪ್ರದೇಶವಾದ ಬಲೂಚಿಸ್ಥಾನದಿಂದ ದಕ್ಷಿಣಕ್ಕೆ ಬಂದು ಉತ್ತರ ಕರ್ಣಾಟಕ ರಾಜ್ಯಗಳಲ್ಲಿ ನೆಲೆಸಿರಬೇಕೆಂದೂ ಅಲ್ಲಿಂದ ಸರ್ಮದಾ ನದಿಯ ಮಾರ್ಗವಾಗಿ ಶಹಾಬಾದ್ ಜಿಲ್ಲೆಯ ಕಡೆ ಹೋಗಿರಬೇಕೆಂದೂ ಅಲ್ಲಿಂದ ಮುಸಲ್ಮಾನರಿಂದ ಓಡಿಸಲ್ಪಟ್ಟು ಛೊಟಾನಾಗಪುರ, ರಾಜಮಹಲ್ ಬೆಟ್ಟಗಳ ಕಡೆಗೆ ಹೋಗಿರಬೇಕೆಂದೂ ಊಹಿಸಲಿಕ್ಕೆ ಕೆಲವು ಆಧಾರಗಳಿವೆ. ಮುಂಡಾ ಮತ್ತು ಭೋಜಪುರಿ ಹಿಂದಿಯ ಪ್ರಭಾವ ಈ ಭಾಷೆಯ ಮೇಲೆ ಸಾಕಷ್ಟು ಬಿದ್ದಿದೆ. ಅಲ್ಲದೆ ಒರಿಯಾ ಮತ್ತು ಬಂಗಾಳಿಯ ಪ್ರಭಾವವೂ ಸ್ವಲ್ಪಮಟ್ಟಿಗೆ ಕಂಡುಬರುತ್ತದೆ. 

	ಮೂಲದ್ರಾವಿಡ ಸ್ಪರ್ಶ ಕಕಾರ ಘರ್ಷ ಖ ಕಾರವಾಗಿರುವುದು ಈ ಭಾಷೆಯ ಒಂದು ಪ್ರಧಾನ ವೈಶಿಷ್ಟ್ಯ. ಉದಾ: ಖನ್ (ಕಣ್ಣು) , ಖಾಖ (ಕಾಗೆ) ಇತ್ಯಾದಿ. ಆದರೆ ಇ ಕಾರ ಪರವಾದ ಕ ಕಾರ ಹಾಗೆಯೇ ಉಳಿದಿದೆ. ಕೀಯ (ಕೆಳಗೆ). ಮೂಲದ ಚಕಾರಗಳಿಗೆ ಎ, ಉ ಪರವಾದಾಗ ಕ ಕಾರವಾಗುತ್ತದೆ. ಕುಡ್ (ಸುಡು) (<ಚುಡು). ವತ್ಸ್ರ್ಯ ಕಂಪಿತ ರೇಫ ಸಕಾರವಾಗಿದೆ. ಕೇಸ್ (ಕೇರು) ದ್ವಿತ್ವ ರೇಫ (ಕಂಪಿತ) ದ್ವಿತ್ವ ತ ಕಾರವಾಗಿಯೂ ರಳ (ಛಿ) ಸ ಕಾರವಾಗಿಯೂ ವ ಕಾರ ಬ ಕಾರವಾಗಿಯೂ ಮಾರ್ಪಾಟಾಗಿರುವುದು ಕಂಡುಬರುತ್ತದೆ. ಬತ್ತ್ (ಒಣಗು) (<ವಛ್ಛಿ), ಜೋಸ್ (ಕೊಳೆ) (<ಕುಛಿಯ್), ಬಯಿ (ಬಾಯಿ) ಇತ್ಯಾದಿ. ನ-ಣಗಳ ಭೇದ ಮಾಯವಾಗಿ ಒಂದೇ ಆಗಿದೆ. ಹಾಗೆಯೇ ಲ-ಳ ಭೇದವೂ ಕಂಡಬರುವುದಿಲ್ಲ. 

	ನಾಮಪದದಲ್ಲಿ ಪುಲ್ಲಿಂಗ ಮತ್ತು ಪುಲ್ಲಿಂಗೇತರ ಎಂಬ ಎರಡು ವಿಧದ ಲಿಂಗವ್ಯವಸ್ಥೆ ಕಂಡುಬರುತ್ತದೆ. ನಮ್ಮ ಸ್ತ್ರೀಲಿಂಗವಾಚಕ ಶಬ್ದಗಳು ಈ ಭಾಷೆಯಲ್ಲಿ ನಪುಂಸಕ ಲಿಂಗವಾಚಕ ಶಬ್ದಗಳೊಡನೆ ಸೇರಿ ಪುಲ್ಲಿಂಗೇತರ ಗುಂಪಿಗಲ್ಲಿರುತ್ತವೆ. ಉತ್ತಮ ಪುರುಷ ಸರ್ವನಾಮದ ಬಹುವಚನ ರೂಪದಲ್ಲಿ ಸಮಾವಿಷ್ಟ, ಅಸಮಾವಿಷ್ಟ ಎಂಬ ಎರಡು ಭೇದಗಳಿವೆ. ಎಮ್ (ನಾವು) ನಾಮ್ (ನಾವು-ಕೇಳುವವನನ್ನೂ ಸೇರಿಸಿ). ಈ ಭಾಷೆಯ ವಿಭಕ್ತಿ ಪ್ರತ್ಯಯಗಳು ಹೀಗಿವೆ: ದ್ವಿತೀಯಾ-ಅನ್, ತೃತೀಯಾ-ತ್ರಿ, ಚತುರ್ಥಿ-ಗೆ, ಪಂಚಮಿ-ತಿ, ಷಷ್ಠಿ-ತ, ನಿ, ಸಪ್ತಮಿ-ಮ ಕ್ರಿಯಾಪದಗಳಲ್ಲಿ ವರ್ತಮಾನ. ಭೂತ, ಭವಿಷ್ಯತ್ ಎಂಬ ಮೂರು ಕಾಲಭೇದಗಳಿವೆ.										
	(ಯು.ಪಿ.ಯು.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ